Friday, March 16, 2007
ಸಾರಾಯಿ ನಿಷೇಧಕ್ಕೆ ನಮ್ಮ ವಿರೋಧ
ಕರ್ನಾಟಕ ಸರಕಾರವು ಸಾರಾಯಿಯನ್ನು ನಿಷೇಧಿಸಲು ಹೊರಟಿರುವುದನ್ನು ಪಬ್ಬಿಗರ ಸಂಘ ತೀವ್ರವಾಗಿ ಪ್ರತಿಭಟಿಸುತ್ತಿದೆ. ಅದಕ್ಕೆ ಕಾರಣಗಳೆಂದರೆ-
- ಸಾರಾಯಿ ಮಾತ್ರ ನಿಷೇಧಿಸಿ ಬಿಯರ್ ವಿಸ್ಕಿಗಳನ್ನು ಮಕ್ತವಾಗಿಸಿದ್ದು. ಇದರಿಂದಾಗಿ ಸಾರಾಯಿ ಕುಡಿಯುವವರೆಲ್ಲ ಬಿಯರ್ ವಿಸ್ಕಿ ಕುಡಿಯತೊಡಗುತ್ತಾರೆ.
- ಬಿಯರ್ ವಿಸ್ಕಿಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಬಿಯರ್ ವಿಸ್ಕಿಗಳ ಗುಣಮಟ್ಟ ಕಡಿಮೆಯಾಗುತ್ತದೆ.
- ಬಿಯರ್ ವಿಸ್ಕಿಗಳಿಗೆ ಹಣ ನೀಡಲು ಅಶಕ್ತರಾದ, ಇದುತನಕ ಸಾರಾಯಿ ಕುಡಿಯುತ್ತಿದ್ದವರಿಗಾಗಿ, ಬಿಯರ್ ವಿಸ್ಕಿ ಬಾಟಲಿಗಳಲ್ಲಿ ಸಾರಾಯಿ ತುಂಬಿಸಿ ಕಳ್ಳದಂಧೆ ಪ್ರಾರಂಭವಾಗುತ್ತದೆ. ನಮ್ಮಂತ ಬಿಯರ್ ವಿಸ್ಕಿ ಕುಡಿಯುವ ಮಂದಿಗೆ ಅಸಲಿ ಯಾವುದು ನಕಲಿ ಯಾವುದು ತಿಳಿಯದೆ ಗೊಂದಲವಾಗುವುದು.
- ಸಾರಾಯಿ ನಿಷೇಧದಿಂದ ಸರಕಾರಕ್ಕೆ ಆಗುವ ನಷ್ಟವನ್ನು ತುಂಬಲು ಬಾರ್ಗಳಿಗೆ ಹೆಚ್ಚಿನ ತೆರಿಗೆ ವಿಧಿಸಿರುವುದರಿಂದ ಬಾರ್ ಪಬ್ಗಳಲ್ಲಿ ಬಿಯರ್ ವಿಸ್ಕಿಗಳ ಬೆಲೆ ಹೆಚ್ಚಾಗುವುದು. ಇದು ಪಬ್ ಪ್ರಿಯರಾದ ನಮಗೆ ತುಂಬಲಾರದ ನಷ್ಟ.
- ಹೆಂಡದಂಗಡಿಗಳಲ್ಲಿ ಸಾರಾಯಿ ಕುಡಿಯುತ್ತಿದ್ದ, ಕುಡಿದು ತೂರಾಡಿ ಗಲಾಟೆ ಮಾಡುತ್ತಿದ್ದ ಕೆಳಮಟ್ಟದ ಮಂದಿ ಇನ್ನುಮುಂದೆ ನಮ್ಮಂತಹ ಮೇಲ್ಮಟ್ಟದ ಮಂದಿಗಳು ಕುಳಿತು ಕುಡಿಯುವ ಪಬ್ಗಳಿಗೆ ನುಗ್ಗಿ ದಾಂಧಲೆ ಸುರು ಮಾಡುತ್ತಾರೆ. ನಮ್ಮಂತಹವರಿಗೆ ಇನ್ನು ಮುಂದೆ ಪಬ್ಗಳಿಗೆ ಹೋಗುವುದು ಕಷ್ಟವಾಗುತ್ತದೆ.
Thursday, March 08, 2007
ಹೊಸ ಸೇವಾ ತೆರಿಗೆಗಳು
ತಭಾರ ಸರಕಾರದ ಹದೇಲಿಪುರದಲ್ಲಿ ನೆಲೆಸಿರುವ ಪಿತ್ತ ಸಚಿವ ಚಿಂದಿ ಅಂಬರಂ ಅವರು ಇತ್ತೀಚೆಗಷ್ಟೆ ತಮ್ಮ ಆಯವ್ಯಯಪತ್ರ ಮಂಡಿಸಿದರು. ಅದರಲ್ಲಿ ಹಲವು ಸೇವೆಗಳಿಗೆ ಸೇವಾತೆರಿಗೆ ವಿಧಿಸಿದ್ದಾರೆ. ನಿನ್ನೆ ನಡೆದ ಗೋಪ್ಯ ಸಭೆಯಲ್ಲಿ ಇನ್ನೂ ಕೆಲವು ಸೇವೆಗಳನ್ನು ಈ ಸೇವಾತೆರಿಗೆಯ ವ್ಯಾಪ್ತಿಗೆ ತರಲು ನಿರ್ಧರಿಸಲಾಯಿತು ಎಂದು ನಂಬಲನರ್ಹ ಮೂಲಗಳಿಂದ ತಿಳಿದುಬಂದಿದೆ. ಅವುಗಳೆಂದರೆ -
- ಸರಕಾರಿ ಕಛೇರಿಗಳಲ್ಲಿ ಅಧಿಕಾರಿಗಳು ಪಡೆಯುವ ಲಂಚ. ಈ ಲಂಚ ಪಡೆದು ಅಧಿಕಾರಿಗಳು ಜನರಿಗೆ ಸೇವೆ ಒದಗಿಸುತ್ತಿದ್ದಾರೆ. ಇದು ನಿಜಕ್ಕೂ ಸಮಾಜಕ್ಕೆ ಸರಕಾರಿ ಅಧಿಕಾರಿಗಳು ನೀಡುತ್ತಿರುವ ಸೇವೆ.
- ಈ ಕಛೇರಿಗಳಲ್ಲಿ ಯಾವ ಯಾವ ಸೇವೆಗಳಿಗೆ ಯಾರು ಯಾರಿಗೆ ಎಷ್ಷೆಷ್ಟು ಲಂಚವನ್ನು ಎಲ್ಲಿ ಹೇಗೆ ತಲುಪಿಸಬೇಕೆಂಬ ಯಾದಿ ಇಟ್ಟುಕೊಂಡು ಅದನ್ನು ತಾವೇ ವಹಿಸಿಕೊಂಡು ಸಾರ್ವಜನಿಕರ ಕಷ್ಟ ಹಗುರ ಮಾಡುವ ಸೇವೆ ಒದಗಿಸುವ ದಳ್ಳಾಳಿಗಳ ಸೇವೆ.
- ಬೀದಿಬದಿಯಲ್ಲಿ, ಇತರೆ ದೊಡ್ಡ ಮಳಿಗೆಗಳಲ್ಲಿ, ಬಾರ್, ಪಬ್, ಇತ್ಯಾದಿಗಳಲ್ಲಿ ಪರವಾನಗಿ ಇಲ್ಲದೆ ವ್ಯಾಪಾರ ನಡೆಸುವ ಮಂದಿಯಿಂದ ತಿಂಗಳು ತಿಂಗಳು ಹಫ್ತಾ ವಸೂಲಿ ಮಾಡಿ ಪೋಲೀಸರಿಗೆ ಮತ್ತು ಸರಕಾರಿ ಅಧಿಕಾರಿಗಳಿಗೆ ಪಾಲು ನೀಡಿ ವ್ಯಾಪಾರಿಗಳ ವ್ಯಾಪಾರವನ್ನು ರಕ್ಷಿಸುವ ಸೇವೆ ನೀಡುವ ಮಂದಿಗೆ.
- ಕಳ್ಳದಂಧೆ ನಡೆಸುವ ಮಂದಿಯಿಂದ ಲಂಚ ತೆಗೆದುಕೊಂಡು ಅವರನ್ನು ರಕ್ಷಿಸುವ ಶಾಸಕರ ಸೇವೆ.
- ತೀಟೆ ತೀರಿಸಿಕೊಳ್ಳಲು ದೈಹಿಕ ಸೇವೆ ನೀಡುವ ಕರೆಕನ್ಯೆಯರ ಸೇವೆ.
ಸದ್ಯದಲ್ಲೇ ಹೊರಡಿಸಲಿರುವ ಬೆತ್ತಲೆ ಪತ್ರದಲ್ಲಿ (ಶ್ವೇತಪತ್ರದಂತೆ) ಈ ಬಗ್ಗೆ ಆದೇಶ ಹೊರಡಿಸಲಾಗುವುದು ಎಂದು ತಿಳಿದುಬಂದಿಲ್ಲ. ಈ ಎಲ್ಲ ಸೇವೆ ನೀಡುವ ಮಂದಿ ತಮ್ಮ ತಮ್ಮ ಸೇವೆಗಳನ್ನು ನೋಂದಾಯಿಸಕೊಳ್ಳುವಂತೆ ಸೂಚಿಸಲಾಗಿದೆ.
ಬೀರು ಕ್ಯಾನ್ ಎಸೆಯುವ ಫ್ರಿಜ್
ಫ್ರಿಜ್ನಲ್ಲಿ ಬಿಯರ್ ಬಾಟಲಿ, ಕ್ಯಾನ್ ಇಡುವುದು ಗೊತ್ತಿದೆ. ಬೀರು ಹೀರಬೇಕೆಂದಾಗೆಲ್ಲ ಎದ್ದು ಹೋಗುವುದು ಬೋರಿನ ಕೆಲಸ. ಅದೂ ಎಂಡ್ಕುಡ್ಕರಿಗೆ ಖಂಡಿತ ಬೋರು. ಇದಕ್ಕೂ ಒಬ್ಬ ಎಂಡ್ಕುಡ್ಕರು ಪರಿಹಾರ ಕಂಡು ಹುಡುಕಿದ್ದಾರೆ. ಅದೆಂದರೆ ಕುಳಿತಲ್ಲಿಗೆ ಬಿಯರ್ ಕ್ಯಾನನ್ನು ಫ್ರಿಜ್ ಎಸೆಯುವುದು. ಇದರ ಬಗ್ಗೆ ಹೆಚ್ಚಿನಬ ವಿವರ ಇಲ್ಲಿ ಓದಬಹುದು.